ಜನನಿಪಿತ ಭೂ ವಾರಿದಾಂಬರ
ವೆನಿಪ ಪಂಚಾಗ್ನಿಯಲಿ ನಾರಾ
ಯಣನ ತ್ರಿಂಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿಗಳ |
ನೆನೆದು ದಿವಸಗಳೆಂಬ ಸಮಿಧೆಗ
ಳನು ನಿರಂತರ ಹೋಮಿಸುತ ಪಾ
ವನಕೆ ಪಾವನನೆನಿಪ ಪರಮನ ಬೇಡು ಪರಮಸುಖ  || ೧ ||

ಗಗನಪಾವಕ ಸಮಿಧೆ ರವಿರ
ಶ್ಮಿಗಳೆ ಧೂಮವು ಅರ್ಚಿಯೆನಿಪುದೆ
ಹಗಲು ನಕ್ಷತ್ರಗಳೆ ಕಿಡಿಗಳು ಚಂದ್ರಮಾಂಗಾರ |
ಮೃಗವರೋದರನೊಳಗೆ ಐರೂ
ಪಗಳ ಚಿಂತಿಸಿ ಭಕ್ತಿರಸ ಮಾ
ತುಗಳ ಮಂತ್ರವ ಮಾಡಿ ಹೋಮಿಸುವರು ವಿಪಶ್ಚಿತರು  || ೨  ||

ಪಾವಕನು ಪರ್ಜನ್ಯ ಸಮಿಧೆಯು
ಪ್ರಾವಹೀಪತಿ ಧೂಮಗಳೆ ಮೇ
ಘಾವಳಿಗಳರ್ಚಿ ಕ್ಷಣ ಪ್ರಭೆಗರ್ಜನವೆ ಕಿಡಿಯು |
ಭಾವಿಸುವುದಂಗಾರ ಸಿಡಿಲೆಂ
ದೀ ವಿಧಾಗ್ನಿಯೊಳಭ್ರಜಾತನ
ಕೋವಿದರು ಹೋಮಿಸುವರನುದಿನ ಪರಮಭಕುತಿಯಲಿ  || ೩  ||

ಧರಣಿಯೆಂಬುದೆ ಅಗ್ನಿ ಸಂವ
ತ್ಸರವೆ ಸಮಿಧೆ ವಿಹಾಯಸವೆ ಪೊಗೆ
ಇರುಳುರಿ ದಿಶಾಂಗಾರವಂತರದಿಗ್ವಲಯ ಕಿಡಿಯು |
ವರುಷವೆಂಬಾಹುತಿಗಳಿಂದಲಿ
ಹರಿಯ ಮೆಚ್ಚಿಸಿ ಸಕಲರೊಳಗ
ಧ್ವರಿಯನಾಗಿರು ಸರ್ವರೂಪಾತ್ಮಕನ ಚಿಂತಿಸುತ  || ೪  ||

ಪುರುಷ ಶಿಖಿ ವಾಕ್ಸಮಿಧೆ ಧೂಮವು
ಕರಣವರ್ಚಿಯು ಜಿಹ್ವೆಶ್ರೋತ್ರಗ
ಳೆರಡು ಕಿಡಿಗಳು ಲೋಚನಗಳಂಗಾರವೆನಿಸುವುವು |
ನಿರುತ ಭುಂಜಿಸುವನ್ನ ಯದುಕುಲ
ವರನಿಗವದಾನಗಳು ಎಂದೀ
ಪರಿ ಸಮರ್ಪಣೆಗೈಯೆ ಕೈಗೊಂಡನುದಿನದಿ ಪೊರೆವ  || ೫  ||

ಮತ್ತೆ ಯೋಷಾಗ್ನಿಯೊಳು ತಿಳಿವುದು
ಪಸ್ಥತತ್ತ್ವವೆ ಸಮಿಧೆ ಕಾಮೋ
ತ್ಪತ್ತಿಪರ ಮಾತುಗಳೆ ಧೂಮವು ಯೋನಿ ಮಹದರ್ಚಿ |
ತತ್ಪ್ರವೇಶಾಂಗಾರ ಕಿಡಿಗಳು
ಉತ್ಸಹಗಳುತ್ಸರ್ಜನವು ಪುರು
ಷೋತ್ತಮನಿಗವದಾನವೆನೆ ಕೈಗೊಂಡು ಮನ್ನಿಸುವ  || ೬ ||

ಐದು ಅಗ್ನಿಗಳಲ್ಲಿ ಮರೆಯದೆ
ಐದು ರೂಪಾತ್ಮಕನ ಇಪ್ಪ
ತ್ತೈದು ರೂಪಗಳನುದಿನದಿ ನೆನೆವರಿಗೆ ಜನುಮಗಳ |
ಐದಿಸನು ನಳಿನಾಕ್ಷ ರಣದೊಳು
ಮೈದುನನ ಕಾಯ್ದಂತೆ ಸಲಹುವ
ಬೈದವಗೆ ಗತಿಯಿತ್ತ ಭಯಹರ ಭಕ್ತವತ್ಸಲನು  || ೭ ||

ಪಂಚನಾರೀತುರಗದಂದದಿ
ಪಂಛರೂಪಾತ್ಮಕನು ತಾ ಷ
ಟ್ಪಂಛರೂಪವ ಧರಿಸಿ ತತ್ತನ್ನಾಮದಿಂ ಕರೆಸಿ |
ಪಂಚಪಾವಕ ಮುಖದಿ ಗುಣಮಯ
ಪಂಚಭೂತಾತ್ಮಕ ಶರೀರವ
ಪಂಛವಿಧ ಜೀವರಿಗೆ ಕೊಟ್ಟಲ್ಲಲ್ಲೆ ರಮಿಸುವನು || ೮ ||

ವಿಧಿಭವಾದಿ ಸಮಸ್ತ ಜೀವರ
ಹೃದಯದೊಳಗೇಕಾತ್ಮನೆನಿಸುವ
ಪದುಮನಾಭನಚ್ಯುತಾದಿ ಅನಂತರೂಪದಲಿ |
ಅಧಿಸುಭೂತಾಧ್ಯಾತ್ಮವಧಿದೈ
ವದೊಳು ಕರೆಸುವ ಪ್ರಾಣನಾಗಾ
ಭಿದನು ದಶರೂಪದಲಿ ದಶವಿಧ ಪ್ರಾಣರೊಳಗಿದ್ದು  || ೯ ||

ಈರೈದುಸಾವಿರದ ಇಪ್ಪ
ತ್ತಾರಧಿಕ ಮುನ್ನೂರು ರೂಪಗ
ಳೀರೆರಡು ಸ್ಥಾನದಲ್ಲಿ ಚಿಂತಿಪುದನುದಿನದಿ ಬುಧರು |
ನೂರ ಇಪ್ಪತ್ತೇಳಧಿಕ ಮೂ
ರಾರು ಸಾವಿರ ರೂಪದಿಂ ದಶ
ಮಾರುತರೊಳಿದ್ದವರವರ ಪೆಸರಿಂದ ಕರೆಸುವನು  || ೧೦ ||

ಚಿತ್ತವಿಸುವುದು ಎಂಟಧಿಕ ಇ
ಪ್ಪತ್ತು ಸಾವಿರ ನಾಲ್ಕು ಶತದೈ
ವತ್ತು ಮೂರು ಸುಮೂರ್ತಿಗಳಹವಿಲ್ಲಿ ಪರ್ಯಂತ |
ಹತ್ತು ನಾಲ್ಕು ರೂಪಗಳ ನೆರ
ಬಿತ್ತರವನೀಪರ್ ತಿಳಿದು ಪುರು
ಷೋತ್ತಮನ ಸರ್ವತ್ರ ಪೂಜೆಯ ಮಾಡು ಕೊಂಡಾಡು  || ೧೧ ||

ಈರೆರೆಡು ಶತದ್ವ್ಯಷ್ವಧಿಕ ಹದಿ
ನಾರು ಸಾವಿರ ರೂಪ ಸರ್ವಶ
ರೀರದೊಳು ಶಬ್ದಾದಿಗಳಧಿಷ್ಠಾನದೊಳಿಪ್ಪ |
ಮಾರುತನು ನಾಗಾದಿ ರೂಪದಿ
ಮೂರನೆಯ ಗುಣಮಾನಿ ಶ್ರೀ ದು
ರ್ಗಾರಮಣ ವಿದ್ಯಾ ಕುಮೋಹವ ಕೊಡುವ ಕರಣಕ್ಕೆ  || ೧೨ ||

ಐದವಿದ್ಯೆಗಳೊಳಗೆ ಇಹ ನಾ
ಗಾದಿಗಳಧಿಷ್ಠಾನದಲಿ ಲಕು
ಮೀಧವನು ಕೃದ್ಧೋಲ್ಕ ಮೊದಲಾದೈದು ರೂಪಗಳ |
ತಾ ಧರಿಸಿ ಸಜ್ಜನರವಿದ್ಯವ
ಛೇದಿಸುವ ತಾಮಸರಿಗಜ್ಞಾ
ನಾದಿಗಳ ಕೊಟ್ಟವರವರ ಸಾಧನವ ಮಾಡಿಸುವ  || ೧೩ ||

ಗೋವುಗಳೊಳುದ್ಗೀತನಿಹ ಪ್ರ
ಸ್ತಾವಹಿಂಕಾರೆರಡು ರೂಪದ
ಲಾವಿಯಜಗಳೊಳಿಹನು ಪ್ರತಿಹರಾಹ್ವಹಯಗಳೊಳು |
ಜೀವನಪ್ರದನಿಧನ ಮನುಜರೊ
ಳೀವಿಧದೊಳಿಹ ಪಂಚಸಾಮವ
ಝಾವಝಾವಕೆ ನೆನವರಿಗೆ ಐದಿಸನು ಜನ್ಮಗಳ  || ೧೪ ||

ಯುಗಚತುಷ್ಟಯಗಳಲ್ಲಿ ತಾನಿ
ದ್ದ್ಯುಗಪ್ರವರ್ತಕ ಧರ್ಮಕರ್ಮಗ
ಳಿಗೆ ಪ್ರವರ್ತಕ ವಾಸುದೇವಾದೀರೆರಡು ರೂಪ |
ತೆಗೆದುಕೊಂಡು ಯುಗಾದಿಕ್ರತು ತಾ
ಯುಗ ಪ್ರವರ್ತಕನೆನಿಸಿ ಧರ್ಮ
ಪ್ರಘಟಕನು ತಾನಾಗಿ ಭಕ್ತರಿಗೀವ ಸಂಪದವ  ||  ೧೫  ||

ತಲೆಯೊಳಿಹ ನಾರಾಯಣನು ಗಂ
ಟಲೆಡೆ ಒಡಲೊಳು ವಾಸುದೇವನು
ಬಲದಲಿಹ ಪ್ರದ್ಯುಮ್ನ ನೆಡಭಾಗದೊಳಗನಿರುದ್ಧ |
ಕೆಳಗಿನಂಗದಿ ಸಂಕರುಷಣನ
ತಿಳಿದು ಈ ಪರಿ ಸಕಲ ದೇಹಗ
ಳೊಳಗೆ ಪಂಚಾತ್ಮಕನ ರೂಪವ ನೋಡು ಕೊಂಡಾದು  || ೧೬ ||

ತನುವಿಶಿಷ್ಟದಿ ಇಪ್ಪ ನಾರಾ
ಯಣನು ಕಟಿಪಾದಾಂತ ಸಂಕರು
ಷಣನು ಶಿರಜಘನಾಂತವಾಗಿಹ ವಾಸುದೇವಾಖ್ಯ |
ಅನಿಮಿಷೇಶನಿರುದ್ಧ ಪ್ರದ್ಯು
ಮ್ನನು ಎಡದಿ ಬಲಭಾಗದಲಿ ಚಿಂ
ತನೆಯ ಮಾಳ್ಪರಿಗುಂಟೆ ಮೈಲಿಗೆ ವಿಧಿನಿಷೇಧಗಳು  || ೧೭ ||

ಪದುಮನಾಭನು ಪಾಣಿಯೊಳಗಿಹ
ವದನದಲಿ ಹೃಷಿಕೇಶ ನಾಸಿಕ
ಸದನದಲಿ ಶ್ರೀಧರನು ಜಿಹ್ವೆಯೊಳಿಪ್ಪ ವಾಮನನು |
ಮೃದುಳ ತ್ವಗ್ದೇಶದಿ ತ್ರಿವಿಕ್ರಮ
ಮಧುವಿರೋದಿಯು ಲೋಚನದಿ ಕ
ರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ  || ೧೮ ||

ಮನದೊಳಿಹ ಗೋವಿಂದ ಮಾಧವ
ಧನಪಸಖ ತತ್ವದೊಳು ನಾರಾ
ಯಣನು ಮಹತ್ತತ್ವದೊಳು ಅವ್ಯಕ್ತದೊಳು ಕೇಶವನು |
ಇನಿತುರೂಪವ ದೇಹದೊಳು ಚಿಂ
ತನೆಯಗೈವ ಮಹಾತ್ಮರಿಳೆಯೊಳು
ಮನುಜರಲ್ಲವರಮರರೇ ಸರಿ ಹರಿಕೃಪಾಬಲದಿ  || ೧೯ ||

ನೆಲದೊಳಿಪ್ಪನು ಕೃಷ್ಣರೂಪದಿ
ಜಲದೊಳಿಪ್ಪನು ಹರಿಯೆನಿಸಿ ಶಿಖಿ
ಯೊಳಗೆ ಇಪಾನು ಪರಶುರಾಮನುಪೇಂದ್ರನೆಂದೆನಿಸಿ |
ಎಲರೊಳಿಪ್ಪ ಜನಾರ್ದನನು ಬಾಂ
ದಳದೊಳಚ್ಯುತ ಗಂಧ ನರಹರಿ
ಪೊಳೆವದೋಕ್ಷಜ ರಸಗಳೊಳು ರಸರೂಪ ತಾನಾಗಿ || ೨೦ ||

ರೂಪ ಪುರುಷೋತ್ತಮನು ಸ್ಪರ್ಶ
ಪ್ರಾಪಕನು ಅನಿರುದ್ಧ ಶಬ್ದದಿ
ವ್ಯಾಪಿಸಿಹ ಪ್ರದ್ಯುಮ್ನುಪಸ್ಥದಿ ವಾಸುದೇವನಿಹ |
ತಾಪೊಳೆವ ಪಾಯುಸ್ಥನಾಗಿ ಜ
ಯಾಪತಿಯು ಸಂಕರುಷಣನು ಸು
ಸ್ಥಾಪಕನು ಅಹಪಾದದೊಳು ದಾಮೋದರನು ಪೊಳೆವ || ೨೧ ||

ಚತುರವಿಂಶತಿ ತತ್ತ್ವದೊಳು ಶ್ರೀ
ಪತಿಯೆ ಅನುರುದ್ಧಾದಿ ರೂಪದಿ
ವಿತತನಾಗಿದ್ದಖಿಳಜೀವರ ಸಂಹನನದೊಳಗೆ |
ವ್ರತತಿಯಂದದಿ ಸುತ್ತಿ ಸುತ್ತುವ
ಪಿತೃಗಳಿಗೆ ತರ್ಪಕನೆನಿಸಿಕೊಂ
ಡತುಳ ಮಹಿಮನು ಷಣ್ಣವತಿ ನಾಮದಲಿ ನೆಲೆಸಿಹನು || ೨೨ ||

ಚತುರವಿಂಶತಿ ತತ್ತ್ವದೊಳು ತ
ತ್ಪತಿಗಳೆನಿಸುವ ಬ್ರಹ್ಮಮುಖ ದೇ
ವತೆಗಳೊಳು ಹನ್ನೊಂದು ನೂರೈವತ್ತೆರಡು ರೂಪ |
ವಿತತನಾಗಿದ್ದೆಲ್ಲ ಜೀವರ
ಜತನ ಮಾಡುವಗೋಸುಗ ಜಗ
ತ್ಪತಿಗೆ ಏನಾದರು ಪ್ರಯೋಜನವಿಲ್ಲವದರಿಂದ  || ೨೩ ||

ಇಂದಿರಾಧವ ಶಕ್ತಿ ಮೊದಲಾ
ದೊಂದಧಿಕ ದಶರೂಪದಿಂದಲಿ
ಹೊಂದಿಹನು ಸಕಲೇಂದ್ರಿಯಗಳಲಿ ಪುರುಷನಾಮಕನು |
ಸುಂದರಪ್ರದ ಪೂರ್ಣಜ್ಞಾನಾ
ನಂದಮಯ ಚಿದ್ದೇಹದೊಳು ತಾ
ನೊಂದರೆಕ್ಷಣವಗಲದಲೆ ಪರಮಾಪ್ತನಾಗಿಪ್ಪ  || ೨೪ ||

ಆರಧಿಕ ದಶರೂಪದಿಂದಲಿ
ತೋರುತಿಪ್ಪನು ವಿಶ್ವಲಿಂಗ ಶ
ರೀರದೊಳು ತೈಜಸನು ಪ್ರಾಜ್ಞನು ತುರ್ಯನಾಮಕನು |
ಮೂರೈದು ರೂಪಗಳ ಧರಿಸುತ
ಲೀರೈದು ಕರಣದೊಳು ಮಾತ್ರದಿ
ಖೇರ ಶಿಖಿಜಲ ಭೂಮಿಯೊಳಗಿಹನಾತ್ಮ ನಾಮದಲಿ  || ೨೫ ||

ಮನದೊಳಾಹಂಕಾರದೊಳು ಚಿಂ
ತನೆಯ ಮಾಳ್ಪುದು ಅಂತರಾತ್ಮನ
ಘನಸುತತ್ತ್ವದಿ ಪರಮನವ್ಯಕ್ತದಲಿ ಜ್ಞಾನಾತ್ಮ
ಇನಿತು ಪಂಚಾಶದ್ವರಣ ವೇ
ದ್ಯನ ಅಜಾದೈವತ್ತು ಮೂರ್ತಿಗ
ಳನು ಸದಾ ಸರ್ವತ್ರ ದೇಹಗಳಲ್ಲಿ ಪೂಜಿಪುದು  || ೨೬ ||

ಚತುರವಿಂಶತಿ ತತ್ತ್ವದೊಳು ತ
ತ್ಪತಿಗಳೆನಿಸುವ ಬ್ರಹ್ಮಮುಖ ದೇ
ವತೆಗಳೊಳು ಹದಿಮೂರು ಸಾವಿರದೆಂಟು ನೂರಧಿಕ |
ಚತುರವಿಂಶತಿ ರೂಪದಿಂದಲಿ
ವಿತತನಾಗಿದ್ದೆಲ್ಲರೊಳು ಪ್ರಾ
ಕೃತ ಪುರುಷನಂದದಲಿ ಪಂಚಾತ್ಮಕನು ರಮಿಸುವನು  || ೨೭ ||

ಕೇಶವಾಗಿ ಸುಮೂರ್ತಿ ದ್ವಾದಶ
ಮಾಸ ಪುಂಡ್ರಗಳಲ್ಲಿ ವೇದ
ವ್ಯಾಸನನಿರುದ್ಧಾದಿ ರೂಪಗಳಾರು ಋತುಗಳಲಿ |
ವಾಸವಾಗಿಹನೆಂದು ತ್ರಿಂಶತಿ
ವಾಸರದಿ ಸತ್ಕರ್ಮಧರ್ಮ ನಿ
ರಾಶೆಯಿಂದಲಿ ಮಾಡು ಕರುಣವ ಬೇಡು ಕೊಂಡಾಡು  || ೨೮ ||

ಲೋಷ್ಟಕಾಂಚನ ಲೋಹ ಶೈಲಜ
ಕಾಷ್ಠ ಮೊದಲಾದಖಿಳ ಚೇತನರೊಳಗೆ ಅನುದಿನವು |
ಚೇಷ್ಟೆಗಳ ಮಾಡಿಸುತ ತಿಳಿಸದೆ
ಪ್ರೇಷ್ಟನಾದಿದ್ದೆಲ್ಲರಿಗೆ ಸ
ರ್ವೇಷ್ಟದಾಯಕ ಸಂತವಿಸುವನು ಸರ್ವ ಜೀವರನು  || ೨೯ ||

ವಾಸುದೇವನಿರುದ್ಧರೂಪದಿ
ಪುಂಶರೀರದೊಳಿಹನು ಸರ್ವದ
ಸ್ತ್ರೀ ಶರೀರದೊಳಿಹನು ಸಂಕರುಷಣನು ಪ್ರದ್ಯುಮ್ನ |
ದ್ವಾಸುಪರ್ಣ ಶ್ರುತಿ ವಿನುತ ಸ
ರ್ವಾಸುನಿಲಯ ನಾರಾಯಣನ ಸದು
ಪಾಸನೆಯ ಗೈವವರೆ ಜೀವನ್ಮುಕ್ತರೆನಿಸುವರು  ||೩೦ ||

ತನ್ನನಂತಾನಂತ ರೂಪ ಹಿ
ರಣ್ಯ ಗರ್ಭಾದಿಗಳೊಳಗೆ ಕಾ
ರುಣ್ಯಸಾಗರ ಹರಹಿ ಅವರವರಖಿಳ ವ್ಯಾಪಾರ |
ಬನ್ನ ಬಡದಲೆ ಮಾಡಿ ಮಾಡಿಸಿ
ಧನ್ಯರೆನಿಸಿ ಸಮಸ್ತ ದಿವಿಜರ
ಪುಣ್ಯಕರ್ಮವ ಸ್ವೀಕರಿಸಿ ಫಲವಿತ್ತು ಪಾಲಿಸುವ  || ೩೧ ||

ಸಾಗರದೊಳಿಹ ನದಿಯ ಜಲ ಭೇ'
ದಾಗಸದೊಳಿಪ್ಪಬ್ದ  ಬಲ್ಲವು
ಕಾಗೆ ಗುಬ್ಬಿಗಳರಿಯೆ ಬಲ್ಲವೆ ನದಿಯ ಜಲಸ್ಥಿತಿಯ |
ಭೋಗಿವರ ಪರಿಯಂಕ ಶಯನನೊ
ಳೀ ಗುಣತ್ರಯ ಬದ್ಧ ಜಗವಿಹು
ದಾಗಮಜ್ಞರು ತಿಳಿವರ ಜ್ಞಾನಿಗಳಿಗಳವಡದು  || ೩೨ ||

ಕರಣಗುಣ ಭೂತಗಳೊಳಗೆ ತ
ದ್ವರರೆನಿಪ ಬ್ರಹ್ಮಾದಿ ದಿವಿಜರೊ
ಳರಿತು ರೂಪ ಚತುಷ್ಟಯಗಳನುದಿನದಿ ಸರ್ವತ್ರ |
ಸ್ಮರಿಸುತನುಮೋದಿಸುತ ಹಿಗ್ಗುತ
ಪರವಶದಿ ಪಾಡುವವರಿಗೆ ತ
ನ್ನಿರವ ತೋರಿಸಿ ಭವ ವಿಮುಕ್ತರ ಮಾಡಿ ಪೋಷಿಸುವ  || ೩೩ ||

ಮೂಲರೂಪನು ಮನದೊಳಿಹ ಶ್ರವ
ಣಾಲಿಯೊಳಗಿಹ ಮತ್ಸ್ಯ ಕೂರ್ಮನು
ಕೋಲರೂಪನು ತ್ವಗ್ರಸನದೊಳಗಿಪ್ಪ ನರಸಿಂಹ |
ಬಾಲವಟು ವಾಮನನು ನಾಸಿಕ
ನಾಳದೊಳು ವದನದಲಿ ಭಾರ್ಗವ
ವಾಲಿ ಭಂಜನ ಹಸ್ತದೊಳು ಪಾದದಲಿ ಶ್ರೀಕೃಷ್ಣ  || ೩೪ ||

ಜಿನವಿಮೋಹಕ ಬುದ್ಧ ಪಾಯುಗ
ದನುಜ ಮರ್ದನ ಕಲ್ಕಿ ಮೇಡ್ರದಿ
ಇನಿತು ದಶರೂಪಗಳ ದಶ ಕರಣಂಗಳಲಿ ತಿಳಿದು |
ಅನುಭವಿಪ ವಿಷಯಗಳ ಕೃಷ್ಣಾ
ರ್ಪಣವೆನಲು ಕೈಗೊಂಬ ವೃಜನಾ
ರ್ದನ ವರ ಜಗನ್ನಾಥ ವಿಠಲ ವಿಶ್ವವ್ಯಾಪಕನು  || ೩೫ ||